ರಾಮಸ್ವಾಮಿ ಅಯ್ಯರ್, ಎಲ್ ವಿ
1895-1948. ತೌಲನಿಕ ದ್ರಾವಿಡ ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮಡಿದ ಪ್ರಸಿದ್ಧ ಭಾರತೀಯ ಭಾಷಾವಿಜ್ಞಾನಿ. ತಮಿಳು ಮತ್ತು ಮಲಯಾಳ ಭಾಷೆಯ ವಿದ್ವಾಂಸರು ಹಾಗೂ ಸಂಶೋಧಕರು. ಎಲ್. ವಿ. ಆರ್. ಎಂದೇ ಜನಪ್ರಿಯರಾಗಿದ್ದ ಇವರು 1895 ಅಕ್ಟೋಬರ್ 25 ರಂದು ಜನಿಸಿದರು. ಶಾಲಾ ಪರೀಕ್ಷಾಧಿಕಾರಿಯಾಗಿದ್ದ ಎಲ್. ಆರ್. ವಿಶ್ವನಾಥ ಅಯ್ಯರ್ ಇವರ ತಂದೆ. ರಾಮಸ್ವಾಮಿ ಅಯ್ಯರ್ ಅವರ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಹುಟ್ಟೂರಿನಲ್ಲಿ ಆಯಿತು. ಎಸ್.ಎಸ್.ಎಲ್.ಸಿ. ಯನ್ನು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿ ಇಂಟರ್‍ಮೀಡಿಯೇಟ್ ಓದಲು ಎರ್ನಾಕುಲಂನ ಮಹಾರಾಜ ಕಾಲೇಜು ಸೇರಿದರು. ಈ ಪರೀಕ್ಷೆಯನ್ನು ಪ್ರಥಮ ರ್ಯಾಂಕ್ ಪಡೆದು ಪಾಸುಮಾಡಿದರು. ಮದರಾಸಿನ ಪ್ರೆಸಿಡೆನ್ಸಿ ಕಾಲೇಜು ಸೇರಿ ಭೂವಿಜ್ಞಾನವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡು ಪ್ರಥಮ ದರ್ಜೆಯಲ್ಲಿ ಬಿ. ಎ. ಪದವಿ ಪಡೆದರು (1914). 1916ರಲ್ಲಿ ಕಾನೂನು ಪದವಿಯನ್ನು ಮುಗಿಸಿ ಎರ್ನಾಕುಲಂನಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು. ಅನಂತರ ತಮ್ಮ ಕಾರ್ಯಕ್ಷೇತ್ರವನ್ನು ತಿರುಚೂರಿಗೆ ವರ್ಗಾಯಿಸಿದರು. ಕೆಲಕಾಲಾನಂತರ ವಕೀಲಿ ವೃತ್ತಿಯ ಬಗ್ಗೆ ಬೇಸರಹೊಂದಿ ಆ ವೃತ್ತಿಯನ್ನು ತ್ಯಜಿಸಿದರು. ಅನಂತರ ಪೂರ್ವ ಕೊಚ್ಚಿನ್‍ನ ಸರ್ಕಾರಿ ಶಿಕ್ಷಣ ಇಲಾಖೆಯನ್ನು ಸೇರಿ ಕುನ್ನಾಕುಲಂ ಮತ್ತು ಎರ್ನಾಕುಲಂಗಳಲ್ಲಿ ಪ್ರೌಢಶಾಲಾ ಶಿಕ್ಷಕರಾದರು. ಆ ವೇಳೆಗೆ ಇವರು ಇಂಗ್ಲಿಷ್ ಸಾಹಿತ್ಯದಲ್ಲಿ ಎಂ. ಎ. ಪದವಿಯನ್ನು ಮುಗಿಸಿದ್ದರಿಂದ ಎರ್ನಾಕುಲಂನ ಮಹಾರಾಜ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ನೇಮಕಗೊಂಡು, ಸಹಾಯಕ ಪ್ರಾಧ್ಯಾಪಕರಾಗಿ, ಪ್ರಾಧ್ಯಾಪಕರಾದರು. ತಮ್ಮ ಸದ್ಗುಣ, ಮೋಹಕ ವ್ಯಕ್ತಿತ್ವ ಹಾಗೂ ನಡವಳಿಕೆಯಿಂದಾಗಿ ಸಹೋದ್ಯೋಗಿಗಳ, ಮಿತ್ರರ, ಸಂಶೋಧನ ಪ್ರಿಯರ ಮತ್ತು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾದರು.

ಅಯ್ಯರ್ ತಮ್ಮನ್ನು ದ್ರಾವಿಡಭಾಷೆಗಳ ಹಾಗೂ ಇಂಡೋ-ಯುರೋಪಿಯನ್ ಭಾಷಾಶಾಸ್ತ್ರದ ಅಧ್ಯಯನಕ್ಕೆ ತೊಡಗಿಸಿಕೊಂಡಿದ್ದರು. ಪ್ರಪಂಚದ ಪ್ರಮುಖ ಭಾಷೆಗಳ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಸ್ವಪ್ರಯತ್ನದಿಂದ ಗ್ರೀಕ್ ಭಾಷೆಯನ್ನು ಕರಗತ ಮಾಡಿಕೊಂಡಿದ್ದರು. ಲ್ಯಾಟಿನ್ ಮತ್ತು ಸಂಸ್ಕøತವಲ್ಲದೆ ಆಧುನಿಕ ಭಾಷೆಗಳಾದ ಜರ್ಮನ್, ಫ್ರೆಂಚ್, ಇಟಾಲಿಯನ್ ಹಾಗೂ ರಷ್ಯನ್ ಭಾಷೆಗಳ ಪರಿಣತಿ ಇವರಿಗಿತ್ತು. ದ್ರಾವಿಡ ಭಾಷಾ ಗುಂಪಿಗೆ ಸೇರಿದ ಭಾಷೆಗಳ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿದ್ದ ಇವರು ಆ ಭಾಷೆಗಳ ಅಧ್ಯಯನಕ್ಕೆ ತಮ್ಮ ಬದುಕನ್ನೇ ಮುಡಿಪಾಗಿರಿಸಿದರು. ವಿವಿಧ ನಿಯತಕಾಲಿಕಗಳಲ್ಲಿ ಚಾರಿತ್ರಿಕ ಮತ್ತು ತೌಲನಿಕ ಭಾಷಾವಿಜ್ಞಾನ ಹಾಗೂ ದ್ರಾವಿಡ ಭಾಷೆಗಳನ್ನು ಕುರಿತು ನೂರಾರು ವಿದ್ವತ್ಪೂರ್ಣ ಸಂಶೋಧನ ಲೇಖನಗಳನ್ನು ಪ್ರಕಟಿಸಿದರು. ಬಂಗಾಲಿ, ಹಿಂದೀ ಮತ್ತು ಇತರ ಭಾರತೀಯ ಭಾಷೆಗಳ ಪರಿಚಯವೂ ಇವರಿಗಿತ್ತು. ಪೂರ್ವ ಏಷ್ಯದ ಭಾಷೆಗಳಾದ ಟಿಬೆಟಿಯನ್, ಮಂಛು ಮತ್ತು ಮಲಯ ಭಾಷೆಗಳ ಬಗ್ಗೆಯೂ ಆಸಕ್ತಿ ಹೊಂದಿದ್ದರು. ಹದಿನೆಂಟು ವಿವಿಧ ಭಾಷೆಗಳನ್ನು ಅಧ್ಯಯನ ಮಾಡಿದ್ದ ಎಲ್. ಎ. ಆರ್. ಅವರ ಬಹುಭಾಷಿಕತ್ವ ಅಚ್ಚರಿಗೊಳಿಸುವಂಥದ್ದು. 

ಅಯ್ಯರ್ ಅವರು ದ್ರಾವಿಡ ಭಾಷೆಗಳ ತೌಲನಿಕ ಮತ್ತು ಐತಿಹಾಸಿಕ ಅಂಶಗಳ ಬಗ್ಗೆ ಸುದೀರ್ಘ ಅಧ್ಯಯನ ಮಾಡಿರುವುದಲ್ಲದೆ ಮಲಯಾಳ ಭಾಷಾವಿಜ್ಞಾನದ ಹಾಗೂ ತಮಿಳು ಭಾಷಾ ಅಧ್ಯಯನದ ಗಂಭೀರ ಸಂಶೋಧನೆಯನ್ನು ನಡೆಸಿದ್ದಾರೆ. ಸಾಹಿತ್ಯಕ, ಅಸಾಹಿತ್ಯಕ ಭಾಷೆಗಳ ವ್ಯಾಕರಣ ಮತ್ತು ಶಬ್ದಕೋಶಗಳನ್ನು ಕುರಿತು ಚರ್ಚಿಸಿದ್ದಾರೆ. ತುಳು ಭಾಷೆಯ ರಚನೆ. ವ್ಯಾಕರಣ ವಿಚಾರಗಳನ್ನು ಕುರಿತು ಜವಾಬ್ದಾರಿಯುತವಾಗಿ ವಿಚಾರಮಾಡಿದ್ದಾರೆ. ದ್ರಾವಿಡ ಭಾಷೆಗಳ ಸಮಗ್ರ ಸ್ವರೂಪವನ್ನು ಪರಿಚಯಿಸುವ ಧ್ವನಿವಿಜ್ಞಾನ, ಧ್ವನಿಮಾವಿಜ್ಞಾನ, ಧ್ವನಿ-ಆಕೃತಿ ವಿಜ್ಞಾನ, ಆಕೃತಿಮಾವಿಜ್ಞಾನ, ಅರ್ಥವಿಜ್ಞಾನ, ವಾಕ್ಯವಿಜ್ಞಾನ, ವ್ಯುತ್ಪತ್ತಿ ವಿಜ್ಞಾನ ಮೊದಲಾದ ವಿಷಯಗಳ ಸಂಶೋಧಿತ ವಿಚಾರಗಳು ಇವರ ಬೌದ್ಧಿಕ ಪ್ರತಿಭೆಗೆ ಸಾಕ್ಷಿ. ನೂರಕ್ಕೂ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಇವರು ಪ್ರಕಟಿಸಿದ್ದಾರೆ. ಎ ಫಿಫ್ತ್ ಸೆಂಚುರಿ ಮಲಯಾಳಂ ಫ್ರೋಸ್ ಟೆಕ್ಸ್ಟ್ (1938), ಎ ಮಾಡ್ರನ್ ಮಲಯಾಳಂ ಟೆನ್ಸ್ ಫಾರಂ (1940), ಎ ಪ್ರಾಬ್ಲಂ ಆಫ್ ದ್ರವಿಡಿಕ್ ಫೊನಾಲಜಿ (1932), ಆಲ್ವಿಯೊಲಾರ್ ತ್, ದ್ ಇನ್ ಮಲಯಾಳಂ ಅಂಡ್ ತಮಿಳ್ (1930), ಏನ್ಯಿಯಂಟ್ ಕರ್ಣಾಟಕ (1937), ದ್ರವಿಡಿಯನ್‍ಕ್ (1928), ಗ್ರಾಮರ್ ಇನ್ ಲೀಲಾತಿಲಕಂ (1934), ಇನಿಶಿಯಲ್ ತುಳು ಸಿಬಿಲೆಂಟ್ಸ್ (1931), ಕುಯಿ ವಡ್ರ್ಸ್ ಅಂಡ್ ದ್ರವಿಡಿಯನ್‍ಆರಿಜಿನ್ಸ್ (1930), ಮೆಟಿರಿಯಲ್ಸ್ ಫಾರ್ ಎ ಸ್ಕೆಚ್ ಆಫ್ ತುಳು ಫೊನಾಲಜಿ (1936), ದ ಹಿಸ್ಟರಿ ಆಫ್ ದಿ ತಮಿಳ್ (1938), ದ ಮಾರ್ಫಾಲಜಿ ಆಫ್ ದ ಓಲ್ಡ್ ತಮಿಳ್ ವರ್ಬ್ (1938)-ಇವು ಇವರ ಕೆಲವು ಮುಖ್ಯ ಸಂಶೋಧನ ಪ್ರಬಂಧಗಳು.
ಮದರಾಸಿನಿಂದ ಪ್ರಕಟವಾಗುತ್ತಿದ್ದ ಎಜುಕೇಷನಲ್ ರಿವ್ಯೂ ಎಂಬ ಪತ್ರಿಕೆಗೆ ಇವರು ಅನೇಕ ವಿದ್ವತ್‍ಪೂರ್ಣ ಲೇಖನಗಳನ್ನು ಬರೆದಿದ್ದಾರೆ (1925-36). ಹಳೆ-ತಮಿಳು, ತುಳು, ಕುಯಿ, ಕುರಕ್, ಗೊಂಡಿ ಮತ್ತು ಬ್ರಾಹೂಈ ಭಾಷೆಗಳ ಕ್ರಿಯಾ ಪದವನ್ನು ಕುರಿತ `ತೌಲನಿಕ ಅಧ್ಯಯನ ಲೇಖನಮಾಲೆಯನ್ನು ಪ್ರಕಟಿಸಿದ ಕೀರ್ತಿ ಇವರದು. ದ್ರವಿಡಿಕ್ ಸ್ಟಡೀಸ್ ಎಂಬ ಶೀರ್ಷಿಕೆಯ ಅಡಿಯಲ್ಲಿ ಹಲವು ದ್ರಾವಿಡ ಭಾಷಾ ತೌಲನಿಕ ವಿಚಾರಗಳನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಇವರ ಲೇಖನಗಳು ತೌಲನಿಕ ದ್ರಾವಿಡ ಅಧ್ಯಯನದ ಸಮಗ್ರ ಅಂಶವನ್ನು ಒಳಗೊಂಡಿದ್ದರೂ ಪ್ರಮುಖ ತೌಲನಿಕ ಆಕೃತಿಮಾ ಅಧ್ಯಯನದ ಪರಿಪೂರ್ಣತೆಯನ್ನು ಪಡೆದಿಲ್ಲ. ಏಕೆಂದರೆ ಇವರಿಗೆ ದ್ರಾವಿಡ ಭಾಷೆಗಳ ಧ್ವನಿ-ಧ್ವನಿಮಾಗಳ ವಿವೇಚನೆ ಮುಖ್ಯವಾಗಿತ್ತೇ ವಿನಃ ವ್ಯಾಕರಣಾಂಶಗಳ ನಿಖರ ವಿವರ ಗೌಣವಾಗಿತ್ತು. ಎ ಬ್ರೀಫ್ ಅಕೌಂಟ್ ಆಫ್ ಮಲಯಾಳಂ ಫೊನೆಟಿಕ್ಸ್ (1925), ದಿ ಎವಲ್ಯೂಷನ್ ಆಫ್ ಮಲಯಾಳಂ ಮಾರ್ಫಾಲಜಿ (1936)-ಇವರ ಎರಡು ಮುಖ್ಯ ಕೃತಿಗಳು.

ತಮಿಳು ಭಾಷಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಇವರು ಪ್ರಕಟಿಸಿರುವ ಲೇಖನಗಳು ತಮಿಳು ಭಾಷಾಕ್ಷೇತ್ರದ ಮೌಲಿಕ ಅಧ್ಯಯನಗಳಾಗಿವೆ. ಹಳೆ-ತಮಿಳಿನ ಕ್ರಿಯಾಪದ, ಧ್ವನಿಮಾವಿಜ್ಞಾನ ಮತ್ತು ತಮಿಳಿನ ಕ್ರಿಯಾ ಆಕೃತಿಮಾ ವಿಜ್ಞಾನವನ್ನು ಕುರಿತು ಬರೆದ ಏಕವಿಷಯ ಪ್ರಬಂಧಗಳು ಗಮನಾರ್ಹವಾದವು. ತಮಿಳು ಸಾಹಿತ್ಯ ಕೃತಿಗಳ ಭಾಷೆಯನ್ನು ಕುರಿತು ಕೃಷಿ ನಡೆಸಿದ್ದಾರೆ. ಲೀಲಾತಿಲಕಂ ಮತ್ತು ತಮಿಳು ವ್ಯಾಕರಣಗಳ ತೌಲನಿಕ ಅಧ್ಯಯನ ಆಸಕ್ತಿದಾಯಕ ಹಾಗೂ ಮಾಹಿತಿಪೂರ್ಣ ಸಾಧನೆಗಳು. ತುಳು ಭಾಷೆಗೆ ಸಂಬಂಧಿಸಿದಂತೆ ನಡೆಸಿದ ಇವರ ಕ್ಷೇತ್ರಕಾರ್ಯ ಗಮನಾರ್ಹವಾದುದು. ಸಂಗ್ರಹಿತ ಭಾಷಿಕದತ್ತ, ವಿಶ್ಲೇಷಣಾಕ್ರಮ. ನಿರೂಪಣಾ ವಿನ್ಯಾಸ, ಉದಾಹರಣೆಗಳ ಖಚಿತತೆ ಯಾರನ್ನಾದರೂ ಚಕಿತಗೊಳಿಸುವುದು. ಉಪಭಾಷಾ ವಿವರಣೆಯನ್ನು ಆಯಾ ಭಾಷೆಯ ಕೌಟುಂಬಿಕತೆಗೆ ಅನ್ವಯವಾಗುವ ಹಾಗೆ ವಿವೇಚಿಸಿದ್ದಾರೆ. ಭಾಷಾ ರಚನೆಯನ್ನು ಕುರಿತ ಇವರ ವಿವರಣಾತ್ಮಕ ವಿಧಾನ ಹಾಗೂ ಪದ ನಿಷ್ಪನ್ನ ಕ್ರಮ ಭಾಷಾವೈಜ್ಞಾನಿಕ ದೃಷ್ಟಿಯನ್ನು ಒಳಗೊಂಡಿದೆ.

ಅಯ್ಯರ್ ಅವರು ಬಾಳಿ-ಬದುಕಿದ್ದು ಮಲಯಾಳ ನಾಡಿನಲ್ಲಿ. ಇವರ ತಾಯ್ನುಡಿ ತಮಿಳು. ಇವರ ವೃತ್ತಿ ಇಂಗ್ಲಿಷ್‍ಭಾಷೆ ಮತ್ತು ಸಾಹಿತ್ಯ ಬೋಧನೆ. ಸಂಶೋಧನೆಯ ಬರೆವಣಿಗೆ ಇಂಗ್ಲಿಷ್‍ನಲ್ಲಿ. ಮಲಯಾಳಂ ಭಾಷೆಯ ಪರಿಚಯವಿದ್ದ ಇವರು ಮಲಯಾಳಂನ ಧ್ವನಿಮೀಮಾಂಸೆ, ಪದರಚನೆ, ಭಾಷಾ ವಿಕಾಸಕ್ರಮ, ವಾಕ್ಯವಿನ್ಯಾಸ ಈ ವಿಚಾರಗಳನ್ನು ಕುರಿತೂ ಬರೆದಿದ್ದಾರೆ. ಪ್ರಾಚೀನ ಕೃತಿಗಳಿಗೆ ಸಂಬಂಧಪಟ್ಟ ಮಲಯಾಳ ಭಾಷಾಸಾಮಗ್ರಿಯನ್ನು ಶೋಧಿಸಿ ತಮ್ಮ ವ್ಯಾಸಂಗದ ಜೊತೆಗೆ ಸಾಧನೆಯ ಹಿರಿಮೆಯನ್ನು ಸಾಧಿಸಿ ತೋರಿಸಿದ್ದಾರೆ. ಹೀಗಾಗಿ ಇವರು ಮಲಯಾಳಂ ಭಾಷಾವಿಜ್ಞಾನಿ, ವಿದ್ವಾಂಸರೆಂದೂ ಖ್ಯಾತರಾಗಿದ್ದಾರೆ.

ಅಯ್ಯರ್ ಅವರು ಕೆಲಸಮಾಡುತ್ತಿದ್ದ ದಿನಗಳಲ್ಲಿ ಸಂಶೋಧನೆಯ ಕೆಲಸಗಳಿಗೆ ಯಾವುದೇ ಪ್ರೋತ್ಸಾಹವಿರಲಿಲ್ಲ. ಕಾಲೇಜಿನಿಂದ ಆರ್ಥಿಕ ಸಹಾಯವಾಗಲಿ, ವಿಶೇಷ ರಜೆಯ ಸೌಕರ್ಯವಾಗಲಿ, ಸಹೋದ್ಯೋಗಿ ಮಿತ್ರರ ಹಾಗೂ ಕಾಲೇಜಿನ ಇತರ ಉದ್ಯೋಗಿಗಳ ಪ್ರೋತ್ಸಾಹದ ಸಹಕಾರವಾಗಲಿ ಇವರಿಗೆ ದೊರೆಯಲಿಲ್ಲ. ಇಂಥ ಹೊತ್ತಿನಲ್ಲಿ ಇವರು ತಮ್ಮ ಪೂರ್ಣ ಸಮಯವನ್ನು ಕ್ಷೇತ್ರಕಾರ್ಯ ಮತ್ತು ಭಾಷಿಕದತ್ತ ಸಂಗ್ರಹಕ್ಕೆ, ಬರೆವಣಿಗೆಗೆ ಮೀಸಲಿಟ್ಟರು. ಸ್ವಸಂತೋಷ ಮತ್ತು ವೈಯಕ್ತಿಕ ಆಸಕ್ತಿಯಿಂದ ಕೆಲಸಮಾಡಿದರು.

ತಮ್ಮ ಪ್ರಾಮಾಣಿಕ ದುಡಿಮೆ ಹಾಗೂ ಮೌಲಿಕ ಸಾಧನೆಯಿಂದಾಗಿ ಭಾರತೀಯ ಭಾಷಾವಿಜ್ಞಾನದಲ್ಲಿ ಅದರಲ್ಲೂ ತೌಲನಿಕ ದ್ರಾವಿಡ ಭಾಷಾ ವಿಜ್ಞಾನದಲ್ಲಿ ಚಿರಸ್ಥಾಯಿಯಾದ ಸ್ಥಾನ ಪಡೆದಿರುವ ಅಯ್ಯರ್ ಅವರು ಮಧುಮೇಹ ಕಾಯಿಲೆಗೆ ತುತ್ತಾಗಿ 1948 ಜನವರಿ 31ರಂದು ತಿರುಚೂರಿನಲ್ಲಿ ಕೊನೆಯುಸಿರೆಳೆದರು. ಅಣ್ಣಾಮಲೈ ವಿಶ್ವವಿದ್ಯಾಲಯದ ದ್ರಾವಿಡ ಭಾಷಾವಿಜ್ಞಾನ ಅಧ್ಯಯನ ವಿಭಾಗ ಇವರ ಪ್ರಮುಖ ಸಂಶೋಧನ ಲೇಖನಗಳನ್ನು `ಕಲೆಕ್ಟಡ್ ಪೇಪರ್ಸ್ ಆಫ್ ಎಲ್.ವಿ.ರಾಮಸ್ವಾಮಿ ಅಯ್ಯರ್ ಎಂಬ ಶೀರ್ಷಿಕೆಯಲ್ಲಿ ಎರಡು ಸಂಪುಟಗಳಲ್ಲಿ ಸಂಗ್ರಹಿಸಿದೆ.
(ಸಿ.ಎಸ್.ಆರ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ